Wednesday, January 17, 2018

skanda

ಕುಕ್ಕೇ ಕ್ಷೇತ್ರದಿ ನೆಲೆಸಿದ ಶ್ರೀ ಸುಬ್ರಮಣ್ಯ
ಕರುಣೆಯಿಂದ ಭಕ್ತರ ಕಾಯಲು ನೀನಿಲ್ಲಿ ಬಂದೆಯಾ
ಚೆಡ್ಡಾನಗರದ ಚೆಲುವನ್ನು ಕಂಡು ಮನಸೋತು
ಚರಣಕೆರಗುವ ನಿನ್ನ ಸುತರ ಹರಸಲು ಬಂದೆಯಾ
ಕುಕ್ಕೇಪುರದಲಿ ನೆಲೆಸಿದ ಶ್ರೀ ಸುಬ್ರಮಣ್ಯ
ಭಕ್ತರ ಕಾಯಲು ನೀ ಬಂದೆಯಾ
ಉತ್ತರ ದೇಶದ ಭಕ್ತರ ಪ್ರಶ್ನೆಗಳಿಗೆ
ಉತ್ತರ ನೀಡಲು ನೀ ಬಂದೆಯಾ
ಶ್ರೀ ನಾರಸಿಂಹನ ನಿತ್ಯವೂ ಪೂಜಿಸುವ
ಗುರುಗಳ ಪ್ರಾರ್ಥನೆಗೊಲಿದು ಬಂದೆಯಾ
ನಾದಲೋಲನೆ ನಾದಪ್ರಿಯನೇ
ನಾನಾ ಸೇವೆಗಳ ಸ್ವೀಕರಿಸಲು ಬಂದೆಯಾ

ಅಂದವೇ ಮೂರ್ತಿವೆತ್ತ ಅಂಬಿಕಾಸುತನೇ
ನಿನ್ನ ಅಭಿಷೇಕ ಅರ್ಚನೆ ಕಣ್ಣಿಗೆ ಹಬ್ಬವು
ಪಾಯಸಾನ್ನಪ್ರಿಯನೆ ನಿನ್ನ ಪ್ರಸಾದವು
ಹಸಿವನು ಇಂಗಿಸಲು ಸಾಧನವು
ಝಗಝಗಿಸುವ ಆರತಿಯಲಿ ಬೆಳಗುವ
ಜಗಜ್ಯೋತಿರೂಪನೆ ವಂದನೆಯು
ಆಯು ಆರೋಗ್ಯ ಸನ್ಮಂಗಳವನಿತ್ತು
ಸತತವು ರಕ್ಷಿಸೆಂದು ಬಿನ್ನಹವು
=========================
ಹೇಗೆ ನಿನ್ನ ಹೊಗಳಲೋ ಕುಮಾರಸ್ವಾಮಿ
ಹೇಗೆ ನಿನ್ನ ಹೊಗಳಲೋ
ಹೇಗೆ ಹೊಗಳಿದರೂ ನಿನ್ನ ಅದು ಕಡಿಮೆಯೋ
ನುಡಿಗಳಿಗೆ ವರ್ಣಿಸಲು ಶಕ್ತಿ ಎಲ್ಲಿದೆಯೋ
ಕುಮಾರಧಾರ ತಟದಲ್ಲಿ ನಿಂತೆ
ಕುಕ್ಕೆಸುಬ್ರಮಣ್ಯಎಂದು ಹೆಸರಂತೆ
ಬಾ ಎಂದು ಪ್ರಾರ್ಥಿಸಿಲು ಧಾವಿಸಿಬಂದು
ನಿನ್ನ ಭಕ್ತರನು ಸಲಹುವೆಯಂತೆ
ಕರುಣಸಾಗರ ನೀನು ಸಾಗರದ ಬಳಿ
ನೆಲಸಬೇಕೆಂದು ನಿಶ್ಚಯಿಸುವೆಯಂತೆ
ಶ್ರೀ ನರಸಿಂಹ ಆರಾಧಕ ಗುರುಗಳು ನೆನೆದು
ನಿನ್ನನು ಇಲ್ಲಿ ನೆಲೆಸಲು ಕರೆಸಿದರಂತೆ
ನಿನ್ನ ರೂಪವು ತಾ ನಯನಮನೋಹರವಂತೆ
ನಿನ್ನ ಸೇವೆಗಳು ಕಣ್ಣಿಗೆ ಹೆಬ್ಬವಂತೆ
ನಿನ್ನ ಭಕ್ತಿಯಿಂದ ಆರಾಧಿಸುವವರಿಗೆ
ನಿನ್ನ ಅನುಗ್ರಹ ನಿಶ್ಚಯವಂತೆ
========================
ಶರವಣನೇ ಬಂದೆಯಾ ಸ್ವಾಮೀ
ಶರವಣನೇ ಬಂದೆಯಾ
ಭಕ್ತರ ಕಾಯಲು ನೀ ಬಂದೆಯಾ
ಭಕ್ತಿಗೆ ಮೆಚ್ಚಿ ನೀ ಬಂದೆಯಾ
ಚೆಂಬೂರಿನಲ್ಲಿರುವ ಚೆಲುವಶ್ರೀ ಸುಬ್ರಮಣ್ಯ
ಚೆಲುವಲಿ ನಿನಗೆ ಸರಿಸಾಟಿ ಯಾರು
ಚೆಂದದಿಂದಲಿ ನಿನ್ನ ಆರಾಧಿಸಲು
ಚಂದ್ರಶೇಖರ ನೀನು ಹರಸುವೆ
ಪ್ರಹ್ಲಾದನಿಗೊಲಿದ ಪರಮಾತ್ಮನ ನಿತ್ಯ
ಸೇವಿಸುವ ಪೂಜ್ಯ ಆಚಾರ್ಯರು
ಪ್ರಥಮ ಪೂಜಿತನ ಸೋದರನೇ ನಿನ್ನ
ಇಲ್ಲಿ ಕುಳ್ಳಿರಿಸಿ ಆನಂದಿಸಿದರು
ಉಡುಪಿಯ ಕೃಷ್ಣ ನಿನ್ನ ಜೊತೆಗಿರಲು
ರಾಯರು ಜೊತೆಗೆ ಅನುಗ್ರಹಿಸಲು
ಮಾಧವ ಮಧುಸೂಧನರ ಮಿಲನವು
ಮನಕೆ ಹರ್ಷವ ತಾ ತಂದಿತು
ನಿನ್ನ ಕಾಣುವ ಭಾಗ್ಯ ದಿನವಿರಲಿ
ನಿನ್ನ ಸೇವಿಸುವ ಪುಣ್ಯವು ಜೊತೆಗಿರಲಿ
ನಿನ್ನ ಅನುಗ್ರಹ ಸದಾ ನಮಗಿರಲಿ
ನಿತ್ಯೋತ್ಸವವು ನಡೆದಿರಲಿ
===================
ಬಂದ ಅವ ಬಂದ ನಮ್ಮ ಪಾರ್ವತಿಯ ಕಂದ
ತಂದ ಅವ ತಂದ ಮನಕೆ ಹರ್ಷವ ತಂದ
ನಿಂದ ಅವ ನಿಂದ ಇಂದು ನಮ್ಮೆದುರು ನಿಂದ
ಚೆಂದ ಅವ ಚೆಂದ ಜಗದಲಿ ಅತಿ ಚೆಂದ
ಇಲ್ಲಿ ಬರುವ ಭಕ್ತರಿಗೆ ಅಭಯ ನೀಡುವೆನೆಂದ
ಎನ್ನ ಸೇವೆಯ ಮಾಡುವ ಭಕ್ತರಿಗೆ ಭಯವೆಲ್ಲಿದೆಯೆಂದ
ಅಭಿಷೇಕ ಅರ್ಚನೆ ಆರಾಧನೆ ನನಗೆ ಪ್ರಿಯವೆಂದ
ಭಕ್ತಿಯಿಂದ ಏನನ್ನೂ ಇತ್ತರು ಸ್ವೀಕರಿಸುವೆನೆಂದ
ಅಂದು ಗುರುಗಳು ಕಂದ ಕನಸು ನನಸಾಯ್ತು ಅವನಿಂದ
ಅಂದದ ಷಣ್ಮುಖ ಕುಳಿತು ಹರಸಲು ನೋಡಲು ಮಹದಾನಂದ
ಪಾರ್ವತಿತನಯ ಪಾಲಿಸು ಎನ್ನಲು ಮುದದಿಂದ ತಾ ಓಡಿಬಂದ
ತಾಯಿ ಮಗುವನು ಸಂತೈಸುವಂತೆ ಪ್ರೀತಿಯ ಮಳೆಗರೆದ ಸ್ಕಂದ
ನಾವೇನು ಕೊಡಲು ಸಾಧ್ಯ ಅವನಿಗೆ ಅವನೇ ಶ್ರೀಮಂತ
ತಂದೆಗೆ ಪ್ರಣವದ ಅರ್ಥವ ಹೇಳಿದ ಅವನೇ ಧೀಮಂತ
ಭವವನು ಹರಿಸಿ ಭಕ್ತಿಯ ನೀಡೋ ಅವನೇ ಭಗವಂತ
ಅವನಂಘ್ರಿಯ ಭಜಿಸಿ ಅನುಗ್ರಹ ಪಡೆಯುವ ಭಕ್ತನೆ ಭಾಗ್ಯವಂತ
=============================================





No comments: